ಬಳ್ಳಾರಿ ಮನೆ ಮಗಳು ಸುಷ್ಮಮ್ಮನಿಗೆ ಭಾವಪೂರ್ಣ ಶ್ರದ್ಧಾಂಜಲಿ






ಬುಧವಾರ ಮಧ್ಯಾನ್ಹ 12 ಘಂಟೆಗೆ ನೆನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರಿಗೆ ಬೆಂ.ಗ್ರಾ. ಜಿಲ್ಲಾ ಬಿಜೆಪಿ ಪದಾಧಿಕಾರಿಗಳೂ ಹಾಗೂ ಕಾರ್ಯಕರ್ತರು ನುಡಿನಮನ ಸಲ್ಲಿಸಿದರು. 1952 ರ ಫೆಬ್ರವರಿ 14 ರಂದು ಜನಿಸಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದಾಗ ಕ್ಯಾಬಿನೆಟ್ ನಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.
ಮಾಜಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದರು, ಅವರನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ದಾಖಲು ಮಾಡಲಾಗಿತ್ತು. ಆರೋಗ್ಯ ಪರಿಸ್ಥಿತಿಯಲ್ಲಿ ತೀವ್ರ ಏರು ಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರವಾಗಿ ಅಸ್ವಸ್ಥರಾಗಿದ್ದ ಕಾರಣ ಅವರಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕವನ್ನು ತ್ಯಜಿಸಿದ್ದು, ಭಾರತೀಯರ ಹೃದಯದಲ್ಲಿ ಒಂದು ಗೌರವ ಸ್ಥಾನ ಮಾನ ಪಡೆದಿದ್ದ ಸುಷ್ಮಾ ಸ್ವರಾಜ್ ಅವರ ನಿಧನ ಇಡೀ ದೇಶ ಕಂಬನಿ ಸುರಿಸುವಂತೆ ಮಾಡಿದೆ ಎಂದು ಬೆಂ.ಗ್ರಾ.ಜಿಲ್ಲಾಧ್ಯಕ್ಷ ರಾಜಣ್ಣ ಹೇಳಿದರು.
ನಂತರ ಶ್ರದ್ಧಾಂಜಲಿ ಸಲ್ಲಿಸಿದ ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಎಂ.ಕೆ.ವತ್ಸಲಾ ಮಾತನಾಡಿ ಸುಷ್ಮಾ ಸ್ವರಾಜ್ ಭಾರತ ದೇಶ ಕಂಡ ಅಪ್ರತಿಮ ರಾಜಕಾರಣಿ. ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ, 1973ರಲ್ಲಿ ಸುಪ್ರೀಂ ಕೋರ್ಟ್ ವಕೀಲೆಯಾಗಿ ಕಾರ್ಯ ಆರಂಭಿಸಿದ್ದರು. ಇವರು ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿ ದೆಹಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸುಷ್ಮಾ ಬಳ್ಳಾರಿಯಿಂದ 1999 ರಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದರು. ಸುಷ್ಮಾ ಸ್ವರಾಜ್ ಮತ್ತು ಸೋನಿಯಾ ಗಾಂಧಿ ನಡುವಿನ ರಾಜಕೀಯ ಸಮರ ಇಡೀ ದೇಶದ ಗಮನ ಸೆಳೆದಿತ್ತು ಎಂದು ನೆನಪಿಸಿಕೊಂಡರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಗರ ಅಧ್ಯಕ್ಷ ಮುದ್ದಪ್ಪ, ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಶಿವಶಂಕರ್, ಮುಖಂಡರಾದ ಎಸ್.ಪ್ರಕಾಶ್, ಮಹದೇವ್, ಗೋಪಿನಾಥ್, ರಾಮಕೃಷ್ಣ, ದೇವರಾಜ್,ಮಂಜುನಾಥ್, ಶಿವು ಮಹಿಳಾ ಮುಖಂಡರಾದ ಪುಷ್ಪಾ ಶಿವಶಂಕರ್, ಕಮಲಾ ಶ್ರೀನಿವಾಸ್, ವತ್ಸಲಾ ಸತ್ಯನಾರಾಯಣ್, ವಾಣಿ, ಗಿರಿಜ, ಉಮಾಮಹೇಶ್ವರಿ, ಡಾ.ಪದ್ಮಾವತಿ ಹಾಜರಿದ್ದರು.
Comments