ಪಶ್ಚಿಮ ಬಂಗಾಳ ಸ್ಪೋಟ ಪ್ರಕರಣದ ಆರೋಪಿ ಬಂದನ. ಉಗ್ರರ ಅಡಗು ತಾಣವಾಗುತ್ತಿರುವ ದೊಡ್ಡಬಳ್ಳಾಪುರ.......

25 Jun 2019 8:24 PM |
1582 Report

ಪಶ್ಚಿಮ ಬಂಗಾಳದಲ್ಲಿ ಐದು ವರ್ಷದ ಹಿಂದೆ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣವನ್ನು ಬೆನ್ನತ್ತಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೊಡ್ಡಬಳ್ಳಾಪುರದಲ್ಲಿ ಆರೋಪಿಯನ್ನು ಬಂಧಿಸಿದೆ. ಬಂಧಿತ ಉಗ್ರನನ್ನು ಹಬೀಬುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಈತ 'ಜಮಾತ್ ಉಲ್ ಮುಹಾಜಿದ್ದೀನ್, ಬಾಂಗ್ಲಾದೇಶ ಭಯೋತ್ಪಾದನಾ ಸಂಘಟನೆಯ ಸದಸ್ಯನಾಗಿದ್ದಾನೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಖಗ್ರಾಗಡ ಎಂಬಲ್ಲಿ 2014ರ ಅಕ್ಟೋಬರ್ 2ರಂದು ಹಸನ್ ಚೌಧರಿ ಎಂಬಾತನ ನಿವಾಸದಲ್ಲಿ ಕಚ್ಚಾ ಬಾಂಬ್ ತಯಾರಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಇಬ್ಬರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದ. ಈ ಬಾಂಬ್ ತಯಾರಿಕೆಯಲ್ಲಿ ಹಬೀಬುಲ್ ರೆಹಮಾನ್ ಕೂಡ ಭಾಗಿಯಾಗಿದ್ದ ಎನ್ನಲಾಗಿದೆ.

ಈ ಪ್ರಕರಣವನ್ನು ಬುರ್ದ್ವಾನ್ ಜಿಲ್ಲಾ ಪೊಲೀಸರು ತನಿಖೆಗೆ ಒಳಪಡಿಸಿದ್ದರು. ನಂತರ ಪಶ್ಚಿಮ ಬಂಗಾಳದ ಸಿಐಡಿಗೆ ವರ್ಗಾಯಿಸಲಾಗಿತ್ತು.  ಕೊನೆಗೆ ಅದರ ಜಾಡು ಹಿರಿದಾಗಿದೆ ಎಂದು ತಿಳಿದ ಬಳಿಕ ಎನ್‌ಐಗೆ ವಹಿಸಲಾಗಿತ್ತು. ಆರೋಪಿ ಉಗ್ರ ಹಬೀಬುಲ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದಲ್ಲಿ ನೆಲೆಸಿರುವುದನ್ನು ಎನ್‌ಐಎ ಪೊಲೀಸರು ಪತ್ತೆಹಚ್ಚಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅವರು, ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಕಾರ್ಯಾಚರಣೆ ನಡೆಸಿದ್ದರು.  ಚಿಕ್ಕಪೇಟೆ ಮಸೀದಿಯಲ್ಲಿ ಅನ್ವರ್ ಹುಸೇನ್ ಇಮಾಮ್ ಎಂಬಾತನ ಆಶ್ರಯದಲ್ಲಿ ಇದ್ದ ಹಬೀಬುಲ್‌ನನ್ನು ಎನ್‌ಐಎ ಬಂಧಿಸಿದೆ.  ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬಳಿಕ ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

2018ರ ಅಗಸ್ಟ್ ನಲ್ಲಿ ಎನ್ಐಎ ಅಧಿಕಾರಿಗಳ ದಾಳಿಯಲ್ಲಿ ಶಂಕಿತ ಉಗ್ರ ಕೌಸರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.  ಆದ್ರೆ ಆ ವೇಳೆ ರೆಹಮಾನ್ ಎಸ್ಕೇಪ್ ಆಗಿದ್ದ.  ಬಳಿಕ ಮೌಲ್ವಿ ಸಹಕಾರದಿಂದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಅಡಗಿಕುಳಿತ್ತಿದ್ದ.  ಅಂದಿನಿಂದ ರೆಹಮಾನ್ ಗಾಗಿ ಬಲೆ ಬೀಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ, ರೆಹಮಾನ್ ದೊಡ್ಡಬಳ್ಳಾಪುರದ ಮಸೀದಿಯಲ್ಲಿರುವುದು ಮಾಹಿತಿ ಸಿಕ್ಕಿದೆ.  ಈ ಮಾಹಿತಿಯ ಮೇರೆಗೆ  ಮಸೀದಿ ಮೇಲೆ ದಾಳಿ ಮಾಡಿ ರೆಹಮಾನ್ ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಉಗ್ರ ಯಾವ ರೀತಿಯಲ್ಲಿ ವಿದ್ವಂಸಕ ಕೃತ್ಯವನ್ನು ನಡೆಸಲು ಮುಂದಾಗಿದ್ದ? ಯಾವೆಲ್ಲಾ ರೀತಿಯಲ್ಲಿ ತನ್ನ ಕೆಲಸ ಮಾಡುತ್ತಿದ್ದ ಎನ್ನುವುದರ ಬಗ್ಗೆ ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ಪಡೆದುಕೊಳ್ಳಲಿದ್ದು, ಒಂದು ವೇಳೆ ಶಂಕಿತ ಉಗ್ರ ಏನಾದರೂ ಭಾರೀ ವಿದ್ವಂಸಕ ಕೃತ್ಯಕ್ಕೆ ಮುಂದಾಗಿದ್ದರೆ ಅದರಿಂದ ರಾಜ್ಯ  ಪಾರಾಗಿದೆ ಎನ್ನಲಾಗಿದೆ.  ಆತನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು. ಹೀಗಾಗಿ ಕೋಲ್ಕತಾದ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಎನ್‌ಐಎ ಕೋರಿದೆ.  ಹಬೀಬುಲ್ ಮೂಲತಃ ಬಿರ್ಭುಮ್‌ನ ಮದರಸಾ ಒಂದರ ಶಿಕ್ಷಕನಾಗಿದ್ದ ಎನ್ನಲಾಗಿದೆ.

Edited By

Ramesh

Reported By

Ramesh

Comments