ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವೇ?

22 May 2019 6:08 AM |
365 Report

ಎಕ್ಸಿಟ್ ಪೋಲ್ ಸುದ್ದಿವಾಹಿನಿಗಳಲ್ಲಿ ಪ್ರಸಾರವಾದದ್ದೇ ತಡ, ಮಮತಾ ಬ್ಯಾನರ್ಜಿಯಿಂದ ಹಿಡಿದು ನಮ್ಮ ಕುಮಾರಸ್ವಾಮಿವರೆಗೆ ಎಲ್ಲರೂ ಇವಿಎಂ (ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್) ಬಗ್ಗೆ ಮಾತಾಡತೊಡಗಿದ್ದಾರೆ! ತಾವು ಸೋಲುವುದು ಖಚಿತ ಎಂಬುದು ಗೊತ್ತಾದೊಡನೆ ಈ ಎಲ್ಲ ಪಕ್ಷಗಳು ಒಂದಾಗಿ ಬೊಬ್ಬೆ ಹಾಕುವುದು ಇದ್ದದ್ದೇ! ಈ ಸಲವೂ ಈ ಗೋಳಾಟ ಪುನರಾವರ್ತನೆಯಾಗಿದೆ. ಆದರೆ ನಿಜಕ್ಕೂ ಇವಿಎಂಗಳನ್ನು ಹ್ಯಾಕ್ ಮಾಡುವುದು ಸಾಧ್ಯವೆ? ಇವಿಎಂಗಳಲ್ಲಿ ದಾಖಲಾದ ಮತಗಳನ್ನು ತಿದ್ದುವುದು, ಬದಲಾಯಿಸುವುದು, ಹೆಚ್ಚುವರಿ ಮತಗಳನ್ನು ಹಾಕುವುದು ಸಾಧ್ಯವೇ? ಚುನಾವಣೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ಓದಿ, ನೀವೇ ನಿರ್ಧರಿಸಿ!

ಎಕ್ಸಿಟ್ ಪೋಲ್ ಸುದ್ದಿವಾಹಿನಿಗಳಲ್ಲಿ ಪ್ರಸಾರವಾದದ್ದೇ ತಡ, ಮಮತಾ ಬ್ಯಾನರ್ಜಿಯಿಂದ ಹಿಡಿದು ನಮ್ಮ ಕುಮಾರಸ್ವಾಮಿವರೆಗೆ ಎಲ್ಲರೂ ಇವಿಎಂ (ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್) ಬಗ್ಗೆ ಮಾತಾಡತೊಡಗಿದ್ದಾರೆ! ತಾವು ಸೋಲುವುದು ಖಚಿತ ಎಂಬುದು ಗೊತ್ತಾದೊಡನೆ ಈ ಎಲ್ಲ ಪಕ್ಷಗಳು ಒಂದಾಗಿ ಬೊಬ್ಬೆ ಹಾಕುವುದು ಇದ್ದದ್ದೇ! ಈ ಸಲವೂ ಈ ಗೋಳಾಟ ಪುನರಾವರ್ತನೆಯಾಗಿದೆ. ಆದರೆ ನಿಜಕ್ಕೂ ಇವಿಎಂಗಳನ್ನು ಹ್ಯಾಕ್ ಮಾಡುವುದು ಸಾಧ್ಯವೆ? ಇವಿಎಂಗಳಲ್ಲಿ ದಾಖಲಾದ ಮತಗಳನ್ನು ತಿದ್ದುವುದು, ಬದಲಾಯಿಸುವುದು, ಹೆಚ್ಚುವರಿ ಮತಗಳನ್ನು ಹಾಕುವುದು ಸಾಧ್ಯವೇ? ಚುನಾವಣೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ಓದಿ, ನೀವೇ ನಿರ್ಧರಿಸಿ!

ಜಿಲ್ಲಾ ಕಛೇರಿಗೆ ಇವಿಎಂಗಳ ವರ್ಗಾವಣೆ.. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕಳಿಸಿಕೊಟ್ಟ ಇವಿಎಂಗಳನ್ನು ಚುನಾವಣಾ ಆಯೋಗ, ಪ್ರತಿ ಜಿಲ್ಲಾ ಕಚೇರಿಗೆ, ಅವರ ಒಟ್ಟು ಪೋಲಿಂಗ್ ಬೂತ್‍ಗಳ ಸಂಖ್ಯೆಗೆ ಅನುಗುಣವಾಗಿ ಕಳಿಸಿಕೊಡುತ್ತದೆ. ಹೀಗೆ ಜಿಲ್ಲಾ ಕಚೇರಿಗೆ ಬಂದ ಮೆಷಿನುಗಳನ್ನು ಸ್ಟ್ರಾಂಗ್ ರೂಮ್‍ನಲ್ಲಿ ಇಡಲಾಗುತ್ತದೆ. ಪ್ರತಿ ಸಲ ಸ್ಟ್ರಾಂಗ್ ರೂಮ್ ಅನ್ನು ತೆರೆದಾಗಲೂ ಎಲ್ಲ ಪಕ್ಷಗಳಿಗೂ ಮಾಹಿತಿ ಕಳಿಸಲಾಗುತ್ತದೆ. ಸ್ಟ್ರಾಂಗ್ ರೂಮ್ ಅನ್ನು ತೆರೆದು, ಅಲ್ಲಿನ ಕೆಲಸಗಳೆಲ್ಲ ಮುಗಿದ ನಂತರ ಬಾಗಿಲು ಹಾಕುವವರೆಗೂ ಪ್ರತಿ ನಿಮಿಷದ ಚಟುವಟಿಕೆಗಳನ್ನೂ ವಿಡಿಯೋ ದಾಖಲೀಕರಣ ಮಾಡಲಾಗುತ್ತದೆ. ಅಲ್ಲದೆ ಸ್ಟ್ರಾಂಗ್ ರೂಮ್‍ನಲ್ಲಿ 24/7 ಸಮಯದಲ್ಲೂ ಸಿಸಿಟಿವಿ ಚಾಲನೆಯಲ್ಲಿರುತ್ತದೆ. ಹೀಗಾಗಿ, ಯಾರದಾದರೂ ಕಣ್ಣು ತಪ್ಪಿಸಿ ಸ್ಟ್ರಾಂಗ್ ರೂಂನ ಒಳಗೆ ಹೋಗುವುದೂ ಸಾಧ್ಯವಿಲ್ಲ, ಅಲ್ಲೇನೂ ಭಾನಗಡಿ ಮಾಡುವುದೂ ಸಾಧ್ಯವಿಲ್ಲ.

ಮತಕ್ಷೇತ್ರಕ್ಕೆ ಇವಿಎಂಗಳ ವರ್ಗಾವಣೆ- ಚುನಾವಣೆಗೆ ಮೂರು ವಾರಗಳಿವೆ ಎನ್ನುವಾಗ ಜಿಲ್ಲಾ ಕಚೇರಿಯಿಂದ ಇವಿಎಂಗಳನ್ನು ಆಯಾ ಮತಕ್ಷೇತ್ರದ ಸ್ಟ್ರಾಂಗ್ ರೂಮ್‍ಗೆ ಕಳಿಸಿಕೊಡಲಾಗುತ್ತದೆ. ಪ್ರತಿ ಮತಕ್ಷೇತ್ರದ ಚುನಾವಣೆಯ ಸಂಪೂರ್ಣ ಹೊಣೆ ಹೊತ್ತುಕೊಳ್ಳುವ ಅಧಿಕಾರಿಗಳನ್ನು ರಿಟರ್ನಿಂಗ್ ಆಫೀಸರ್ ಎನ್ನುತ್ತಾರೆ. ರಿಟರ್ನಿಂಗ್ ಆಫೀಸರುಗಳ ಸಮ್ಮುಖದಲ್ಲಿ ಜಿಲ್ಲಾ ಕಚೇರಿಯ ಸ್ಟ್ರಾಂಗ್ ರೂಂ ಅನ್ನು ತೆರೆಯುತ್ತಾರೆ. ನಂತರ "Randomization" ಕ್ರಮದಲ್ಲಿ ಇವಿಎಂಗಳನ್ನು ಹಂಚಲಾಗುತ್ತದೆ. ಅಂದರೆ, ಇವಿಎಂಗಳನ್ನು ಯಾದೃಚ್ಛಿಕವಾಗಿ ಹಂಚಲಾಗುತ್ತದೆ. ಅಂದರೆ ಯಾರಿಗೆ ಯಾವ ಎವಿಎಂ ಸಿಗುತ್ತದೆ ಎಂದು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ. ಹೀಗೆ ಹಂಚಿಕೆಯಾದ ಮೇಲೆ ತಂತಮ್ಮ ಇವಿಎಂಗಳನ್ನು ತೆಗೆದುಕೊಂಡು ರಿಟರ್ನಿಂಗ್ ಆಫೀಸರ್‍ಗಳು ತಂತಮ್ಮ ಮತಕ್ಷೇತ್ರಗಳಿಗೆ ಹೋಗುತ್ತಾರೆ. ಅಲ್ಲಿ ಮತ್ತೆ ಇವಿಎಂಗಳನ್ನು ಸ್ಟ್ರಾಂಗ್ ರೂಂನಲ್ಲಿ ಇಡಲಾಗುತ್ತದೆ. ಹಿಂದಿನಂತೆಯೇ ಇಲ್ಲೂ ಸಕಲ ಭದ್ರತಾ ವ್ಯವಸ್ಥೆಗಳಿರುತ್ತವೆ. ದಿನದ ಇಪ್ಪತ್ತನಾಲ್ಕು ತಾಸೂ ಕಣ್ಗಾವಲಿಡುವ ಸಿಸಿಟಿವಿ ಕೂಡ ಇರುತ್ತದೆ.

ಚುನಾವಣೆಗೆ ಒಂದು ವಾರ ಇದೆ ಎನ್ನುವಾಗ ಎರಡನೇ ಯಾದೃಚ್ಛಿಕ ಆಯ್ಕೆ ನಡೆಯುತ್ತದೆ. ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳನ್ನೂ ಕರೆಯಲಾಗುತ್ತದೆ. ಅವರ ಸಮ್ಮುಖದಲ್ಲಿ, ಇವಿಎಂ ಯಂತ್ರಗಳನ್ನು ಯಾದೃಚ್ಛಿಕವಾಗಿ ಹಂಚಿ, ಯಾವ ಇವಿಎಂ ಯಾವ ಪೋಲಿಂಗ್ ಬೂತ್‍ಗೆ ಹೋಗಬೇಕು ಎಂಬುದನ್ನು ಅಂತಿಮಗೊಳಿಸಲಾಗುತ್ತದೆ. ಪ್ರತಿ ಇವಿಎಂನ ನಂಬರ್ ಅನ್ನೂ ದಾಖಲಿಸಿಕೊಂಡು, ಯಾವ ಯಂತ್ರ ಯಾವ ಬೂತ್‍ಗೆ ನಿಗದಿಯಾಗಿದೆ ಎಂಬುದರ ಲೆಕ್ಕ ತೆಗೆಯಲಾಗುತ್ತದೆ. ಇವೆಲ್ಲವೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಎದುರಲ್ಲೇ ನಡೆಯುತ್ತವೆ ಎಂಬುದನ್ನು ಗಮನಿಸಬೇಕು. ಇವಿಎಂ - ಅವುಗಳ ಸಂಖ್ಯೆ - ಪೋಲಿಂಗ್ ಬೂತ್ ವಿವರ - ಇವೆಲ್ಲವನ್ನೂ ಅಲ್ಲಿ ಹಾಜರಿರುವ ಪ್ರತಿ ಪಕ್ಷದ ಪ್ರತಿನಿಧಿಗೂ ಕೊಡಲಾಗುತ್ತದೆ. ಯಾವುದೇ ಪೋಲಿಂಗ್ ಬೂತ್‍ನಲ್ಲಿ ಭಿನ್ನ ಇವಿಎಂ ಬಳಕೆಯಾಗಲು ಸಾಧ್ಯವೇ ಇಲ್ಲ! ಇವಿಎಂಗಳನ್ನು ಪೋಲಿಂಗ್ ಬೂತ್‍ಗಳಿಗೆ ಕಳಿಸುವ ಮುನ್ನ, ಅವು ಸರಿ ಇದ್ದಾವೋ ಇಲ್ಲವೋ ನೋಡಬೇಕಲ್ಲ? ಹಾಗಾಗಿ ಪ್ರತಿ ಅಭ್ಯರ್ಥಿಗೂ ಒಂದೊಂದು ಓಟುಗಳನ್ನು ಹಾಕಿ ಪರೀಕ್ಷಿಸುತ್ತಾರೆ. ಯಾವುದೇ ಅಭ್ಯರ್ಥಿಗೆ ಒಂದಕ್ಕಿಂತ ಹೆಚ್ಚು ಮತ ಬೀಳುವುದಿಲ್ಲ ಎಂಬುದನ್ನು ಈ ಹಂತದಲ್ಲಿ ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಪರೀಕ್ಷೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಎದುರಲ್ಲೇ ನಡೆಯುತ್ತದೆ. ಅದೇ ದಿನ ಇನ್ನೊಂದು ಪರೀಕ್ಷೆಯೂ ನಡೆಯುತ್ತದೆ. ಅದೇನೆಂದರೆ, ಯಾವುದೇ ರಾಜಕೀಯ ಪಕ್ಷ ಬಯಸಿದರೆ, ಅವರೇ ಇವಿಎಂ ಯಂತ್ರವನ್ನು ಪರೀಕ್ಷಿಸಬಹುದು. ಆ ಪ್ರತಿನಿಧಿಗಳು ತಾವು ಬಯಸಿದ ಇವಿಎಂನಲ್ಲಿ ಒಟ್ಟು 1000 ಓಟುಗಳನ್ನು ಹಾಕಿ, ತಾವು ಹಾಕಿದ ಮತಗಳು ಮತ್ತು ಇವಿಎಂನಲ್ಲಿ ದಾಖಲಾದ ಮತಗಳು - ಇವುಗಳ ನಡುವೆ ಹೋಲಿಕೆ ಇದೆಯೇ ಇಲ್ಲವೇ ಎಂಬುದನ್ನು ನೋಡಬಹುದು. ಈ ಎಲ್ಲ ಪರೀಕ್ಷೆಗಳ ನಂತರ ಎಲ್ಲರಿಗೂ ಒಪ್ಪಿತವಾದ ಮೇಲೆ ಇವಿಎಂಗಳಿಗೆ ಸೀಲ್ (ಮುದ್ರೆ) ಹಾಕಲಾಗುತ್ತದೆ. ಪ್ರತಿ ಸೀಲ್‍ಗೂ ಒಂದು ನಿರ್ದಿಷ್ಟ ಸಂಖ್ಯೆಯನ್ನು ಸೂಚಿಸಲಾಗುತ್ತದೆ.

ಮತದಾನದ ದಿನದಂದು- ಮತದಾನದ ದಿನ, ಪ್ರತಿ ಪೋಲಿಂಗ್ ಬೂತ್‍ಗೂ ಒಬ್ಬ ಪ್ರತಿನಿಧಿಯನ್ನು ಇರಿಸಲು ಅಭ್ಯರ್ಥಿಗೆ ಅವಕಾಶವಿದೆ. (ನೀವು ಮತ ಹಾಕುವ ದಿನ ಕೋಣೆಯಲ್ಲಿ ಚುನಾವಣಾ ಅಧಿಕಾರಿಗಳ ಹಿಂದೆ ಮೂರ್ನಾಲ್ಕು ಮಂದಿ ಕೂತಿರುವುದನ್ನು ನೋಡಿರಬಹುದು. ಇವರು ವಿವಿಧ ಪಕ್ಷಗಳ ಪ್ರತಿನಿಧಿಗಳು) ಈ ಪ್ರತಿನಿಧಿಗಳ ಕೈಯಲ್ಲೂ ಮತದಾರರ ಪರಿಷ್ಕೃತ ಪಟ್ಟಿ ಇರುತ್ತದೆ. ಪ್ರತಿ ಮತದಾರ ಬಂದಾಗಲೂ ಆತನ ವಿವರಗಳನ್ನು ಚುನಾವಣಾ ಅಧಿಕಾರಿಗಳು ಮಾತ್ರವಲ್ಲ, ಈ ಪ್ರತಿನಿಧಿಗಳು ಕೂಡ ಪಡೆಯುತ್ತಾರೆ. ಯಾರಾದರೂ ಎರಡೆರಡು ಸಲ ಮತ ಹಾಕಲು ಬಂದರೆ ಚುನಾವಣಾ ಅಧಿಕಾರಿಗಳು ಮಾತ್ರವಲ್ಲ ಈ ಪ್ರತಿನಿಧಿಗಳು ಕೂಡ ಅದನ್ನು ಪತ್ತೆಹಚ್ಚಬಹುದು.

ಮತದಾನದ ದಿನ ಬೆಳಗ್ಗೆ, ಸಾರ್ವಜನಿಕರಿಂದ ಮತದಾನ ನಡೆಯುವ ಮೊದಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇವಿಎಂಗಳನ್ನು ಮತ್ತೊಮ್ಮೆ ಪರೀಕ್ಷಿಸಲು ಅವಕಾಶವಿದೆ. ಪ್ರತಿ ಪ್ರತಿನಿಧಿಯೂ ಕನಿಷ್ಠ 50 ಮತಗಳನ್ನು ದಾಖಲಿಸಿ, ಅವು ಸರಿಯಾಗಿ ಯಂತ್ರದಲ್ಲಿ ದಾಖಲಾಗಿವೆಯೇ ಎಂದು ನೋಡಬಹುದು. ಹೀಗೆ ಎಲ್ಲ ಪ್ರತಿನಿಧಿಗಳು ಮತಯಂತ್ರ ಪರೀಕ್ಷಿಸಿ ಅದು ಸರಿ ಇದೆ ಎಂದು ಒಪ್ಪಿದ ಮೇಲೆಯೇ ಮತದಾನ ಪ್ರಾರಂಭವಾಗುತ್ತದೆ. ಮತಯಂತ್ರ ಸರಿಯಿದೆ ಎಂದು ಪ್ರತಿನಿಧಿಗಳು ಒಪ್ಪಿದ ಮೇಲೆ ಚುನಾವಣಾ ಅಧಿಕಾರಿಗಳು ಅವರಿಂದ ಪ್ರಮಾಣಪತ್ರಗಳನ್ನು ತೆಗೆದುಕೊಳ್ಳುತ್ತಾರೆ. ಮತದಾನ ಮುಗಿದ ಮೇಲೆ ಎಲ್ಲ ಇವಿಎಂಗಳನ್ನು ಮತ್ತೆ ಸೀಲ್ ಮಾಡಲಾಗುತ್ತದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳು ಒಪ್ಪಿದ ಮೇಲೆಯೇ ಇವಿಎಂಗಳನ್ನು ಸ್ಟ್ರಾಂಗ್ ರೂಂಗೆ ಕಳಿಸಿಕೊಡಲಾಗುತ್ತದೆ. ಆ ದಿನ ಆ ಪೋಲಿಂಗ್ ಬೂತ್‍ನಲ್ಲಿ ಎಷ್ಟು ಮತದಾನ ಆಗಿದೆ ಎಂಬ ಖಚಿತ ಲೆಕ್ಕಾಚಾರವನ್ನು ಎಲ್ಲ ಪ್ರತಿನಿಧಿಗಳಿಗೂ ಹಂಚಲಾಗುತ್ತದೆ. ಆ ಪ್ರತಿನಿಧಿಗಳು ತಮ್ಮಲ್ಲಿರುವ ದಾಖಲೆಯ ಜೊತೆ ಅದನ್ನು ಹೋಲಿಸಿ ನೋಡಿ ಖಚಿತಪಡಿಸಿಕೊಳ್ಳಬಹುದು.

ಮತದಾನವನ್ನು ದಾಖಲಿಸಿಕೊಂಡಿರುವ ಇವಿಎಂಗಳು ಮತ್ತೆ ಸ್ಟ್ರಾಂಗ್ ರೂಂ ಸೇರಿವೆಯಷ್ಟೆ? ಈ ಸ್ಟ್ರಾಂಗ್ ರೂಂಗಳಲ್ಲಿ ಸಿಸಿಟಿವಿ ಇರುತ್ತದೆ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ಅದು ಚಾಲೂ ಇರುತ್ತದೆ. ಕೋಣೆಯ ಹೊರಗೆ ಪೊಲೀಸ್ ಭದ್ರತೆ ಇರುತ್ತದೆ. ಈಗ ಅತಿ ಮುಖ್ಯ ವಿಷಯವನ್ನು ಕೇಳಿ: ಯಾವುದೇ ಪಕ್ಷ ಬಯಸಿದರೆ ಆ ಸ್ಟ್ರಾಂಗ್ ರೂಂನ ಮುಂದೆಯೇ ದಿನದಿಪ್ಪತ್ತನಾಲ್ಕು ತಾಸೂ ಕೂತಿರುವುದಕ್ಕೂ ಚುನಾವಣಾ ಆಯೋಗ ಅವಕಾಶ ಕೊಡುತ್ತದೆ! ಅಂದರೆ, ಮತದಾನ ಮುಗಿದ ದಿನದಿಂದ ಮತಗಳ ಎಣಿಕೆ ಆಗುವ ದಿನದವರೆಗೂ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಗಳು ಸ್ಟ್ರಾಂಗ್ ರೂಂನ ಎದುರಲ್ಲಿ ಒಂದೇ ಒಂದು ನಿಮಿಷವೂ ಬಿಡದಂತೆ ಕಾವಲು ಕಾಯಬಹುದು! ಇದಕ್ಕೆ ಚುನಾವಣಾ ಆಯೋಗದ ಅನುಮತಿ ಇದೆ! ಮತದಾನದ ಅಂತ್ಯದಲ್ಲಿ ಸೀಲ್ ಮಾಡಲಾದ ಇವಿಎಂಗಳನ್ನು ಮತ್ತೆ ತೆರೆಯುವುದು ಎಣಿಕೆಯ ದಿನವೇ.

ಮತ ಎಣಿಕೆಯ ದಿನ- ಮತ ಎಣಿಕೆಯ ದಿನ ಸ್ಟ್ರಾಂಗ್ ರೂಂನ ಮುಂದೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಇವಿಎಂಗಳ ಸೀಲ್ ತೆರೆಯಲಾಗುತ್ತದೆ. ಎಣಿಕೆಗೆ ಎತ್ತಿಕೊಂಡ ಪ್ರತಿ ಯಂತ್ರದ ವಿಷಯದಲ್ಲೂ, (1) ಅದು ಯಾವ ಪೋಲಿಂಗ್ ಬೂತ್‍ನ ಇವಿಎಂ? ಅದರ ಸೀಲ್‍ನಲ್ಲಿ ಬರೆದ ಮಾಹಿತಿ ಸರಿಯಾಗಿದೆಯೆ? (2) ಎಲ್ಲ ಸೀಲ್ ಮತ್ತು ಟ್ಯಾಗ್‍ಗಳೂ ಸರಿಯಾಗಿವೆಯೇ? ಎಂಬುದನ್ನು ಪರೀಕ್ಷಿಸಲಾಗುತ್ತದೆ. ಈ ಸಂದರ್ಭದಲ್ಲಿ ಸೀಲ್ ತೆಗೆಯಲಾಗಿದೆ, ಮಾಹಿತಿ ತಪ್ಪಾಗಿದೆ ಎಂಬ ಯಾವುದೇ ದೂರನ್ನು ಯಾವುದೇ ಪಕ್ಷದ ಪ್ರತಿನಿಧಿ ಮಾಡಿದರೂ ಅದನ್ನು ಚುನಾವಣಾ ಅಧಿಕಾರಿಗಳು ನೋಟ್ ಮಾಡಿಕೊಳ್ಳುತ್ತಾರೆ. ಆ ದೂರುಗಳ ವಿಚಾರಣೆ ನಡೆದು ವಿವಾದ ಇತ್ಯರ್ಥವಾದ ಮೇಲೆಯೇ ಆ ಇವಿಎಂ ಅನ್ನು ಎಣಿಕೆಗೆ ಎತ್ತಿಕೊಳ್ಳಲಾಗುತ್ತದೆ. ಇವಿಎಂನಲ್ಲಿ ದಾಖಲಾದ ಮತಗಳಿಗೂ ಪೋಲಿಂಗ್ ಬೂತ್‍ನಲ್ಲಿ ಪಕ್ಷಗಳ ಪ್ರತಿನಿಧಿಗಳಿಗೆ ಕೊಟ್ಟ ವಿವರಕ್ಕೂ ಹೋಲಿಕೆ ಇಲ್ಲದೇಹೋದರೆ ಪ್ರತಿನಿಧಿಗಳು ದೂರು ದಾಖಲಿಸಬಹುದು.

ಇನ್ನೊಂದು ಮುಖ್ಯ ವಿಷಯ ಗಮನಿಸಿ: ಎಲ್ಲ ಅಭ್ಯರ್ಥಿಗಳ ಸರ್ವಸಮ್ಮತಿ ಇಲ್ಲದೆ ಮತಗಳ ವಿವರಗಳನ್ನು ಹೊರಗೆಲ್ಲೂ ಕೊಡಲಾಗುವುದಿಲ್ಲ. ಇಷ್ಟಾದರೂ ಪಕ್ಷಗಳಿಗೆ ಅನುಮಾನ ಇದೆಯೇ? ಸರಿ! ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಯಾವುದೇ ಪೋಲಿಂಗ್ ಬೂತ್‍ನ ಇವಿಎಂ ಅನ್ನು ಯಾದೃಚ್ಛಿಕವಾಗಿ ಆರಿಸಬಹುದು. ಅದರಲ್ಲಿ ದಾಖಲಾದ ಮತಗಳನ್ನೂ ವಿವಿಪ್ಯಾಟ್ ಸ್ಲಿಪ್‍ಗಳನ್ನೂ ಹೋಲಿಸಿ ನೋಡಬಹುದು. ಇವಿಎಂನಲ್ಲಿ ದಾಖಲಾದ ಮತಗಳಿಗೂ ವಿವಿಪ್ಯಾಟ್ ಸ್ಲಿಪ್‍ಗಳಿಗೂ ಒಂದೇ ಒಂದು ಸಣ್ಣ ವ್ಯತ್ಯಾಸ ಬಂದರೂ ಆ ಪ್ರತಿನಿಧಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು.

ಈ ಸಂಗತಿಗಳನ್ನು ಗಮನಿಸಿ:

(1) ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ; ಮಾಡಬಹುದು; ಅಮೆರಿಕಾದ ಒಬ್ಬ ಭಾರತದ ಇವಿಎಂಗಳನ್ನು ಹ್ಯಾಕ್ ಮಾಡಿದ್ದಾನೆ - ಇತ್ಯಾದಿ ಸುದ್ದಿಗಳು ದಿನಂಪ್ರತಿ ಕಾಣಿಸಿಕೊಳ್ಳುತ್ತಿವೆ. ರಾಜಕೀಯ ನಾಯಕರು ಇಂಥ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇವಿಎಂಗಳನ್ನು ಅಂತರ್ಜಾಲಕ್ಕೆ ಸಂಪರ್ಕ ಮಾಡದಿರುವಾಗ ಅವುಗಳು ಹ್ಯಾಕ್ ಆಗುವುದು ಹೇಗೆ? ಅಂತರ್ಜಾಲದ ಸಂಪರ್ಕ ಇದ್ದಾಗ ಮಾತ್ರ ಯಾವುದಾದರೂ ಎಲೆಕ್ಟ್ರಾನಿಕ್ ಉಪಕರಣವನ್ನು ಹ್ಯಾಕ್ ಮಾಡಲು ಸಾಧ್ಯ; ಇಲ್ಲವಾದರೆ ಸಾಧ್ಯವೇ ಇಲ್ಲ - ಎಂಬ ಸರಳಾತಿಸರಳ ಸತ್ಯ ರಾಜಕೀಯ ಪಕ್ಷಗಳಿಗೆ, ಮಾಧ್ಯಮದ ಮಿತ್ರರಿಗೆ ಗೊತ್ತಿಲ್ಲವೆ? ಅಂತರ್ಜಾಲದ ಸಂಪರ್ಕ ಇಲ್ಲದಿರುವಾಗ ಕೂಡ ಇವಿಎಂ ಅನ್ನು ಹ್ಯಾಕ್ ಮಾಡುವುದು ಸಾಧ್ಯ ಎನ್ನುತ್ತೀರಾ? ಹೌದು, ಸಾಧ್ಯವಿದೆ. ಯಾವಾಗ ಗೊತ್ತೆ? ಇವಿಎಂನ ಒಳಗಿನ ಸರ್ಕ್ಯೂಟ್ ಗೆ ಹೊರಗಿನಿಂದ ಮತ್ತೊಂದು ಯಂತ್ರವನ್ನು ತಂತಿ ಮೂಲಕ ಜೋಡಿಸಿದಾಗ. ಲ್ಯಾಬ್ ನಲ್ಲಲ್ಲದೆ ಮತ್ತು ಪರಿಣಿತರ ಸಹಕಾರವಿಲ್ಲದೆ ಇಂಥ ಮ್ಯಾಜಿಕ್ ಮಾಡಲು ಸಾಧ್ಯವೇ ಇಲ್ಲ.

(2) ಮತದಾನ ಮುಗಿದ ಮೇಲೆ ಸ್ಟ್ರಾಂಗ್ ರೂಂನ ಒಳಹೊಕ್ಕು ಹೆಚ್ಚುವರಿ ಮತಗಳನ್ನು ಹಾಕಲಾಗುತ್ತದೆ - ಎಂದೂ ಕೆಲವೊಂದು ರಾಜಕೀಯ ಪಕ್ಷಗಳು, ನಾಯಕರು ಅಲವತ್ತುಕೊಳ್ಳುತ್ತಿದ್ದಾರೆ. ಇದು ಆಯಾ ನಾಯಕರ ಬುದ್ಧಿಪ್ರಮಣೆಯನ್ನೂ ಅಜ್ಞಾನವನ್ನೂ ಮೂರ್ಖತನವನ್ನೂ ತೋರಿಸುತ್ತದೆ. ಮತದಾನದ ದಿನ, ಕೊನೆಯಲ್ಲಿ ಪೋಲಿಂಗ್ ಆಫೀಸರ್, ಇವಿಎಂ ಯಂತ್ರದಲ್ಲಿ ಕ್ಲೋಸ್ ಎಂಬ ಬಟನ್ ಒತ್ತುತ್ತಾರೆ. ಒಮ್ಮೆ ಈ ಬಟನ್ ಒತ್ತಿದ ಮೇಲೆ ಮತ್ತೆ ಒಂದೇ ಒಂದು ಮತವನ್ನೂ ದಾಖಲಿಸಲು ಸಾಧ್ಯವಿಲ್ಲ. ಹಾಗಿರುವಾಗ ಸ್ಟ್ರಾಂಗ್ ರೂಂನ ಒಳನುಗ್ಗಿ ಹೆಚ್ಚುವರಿ ಮತಗಳನ್ನು ಹಾಕುವುದು ಹೇಗೆ? ಬಿಡಿ, ಹೆಚ್ಚು ಮತಗಳನ್ನು ಹಾಕಿದರೆಂದೇ ಇಟ್ಟುಕೊಳ್ಳೋಣ. ಮತದಾನದ ದಿನ ಎಷ್ಟು ಮತದಾನ ಆಗಿದೆ ಎಂಬ ಕರಾರುವಾಕ್ ಸಂಖ್ಯೆಯನ್ನು ಪೋಲಿಂಗ್ ಆಫೀಸರ್, ಪಕ್ಷಗಳ ಪ್ರತಿನಿಧಿಗಳಿಗೆ ಕೊಟ್ಟಿರುತ್ತಾರಲ್ಲ? ಕೆಲವು ಮತಗಳನ್ನು ಅಳಿಸಿ, ಅಷ್ಟೇ ಸಂಖ್ಯೆಯ ಮತಗಳನ್ನು ಕಳ್ಳತನದಲ್ಲಿ ಹಾಕಲಾಗುತ್ತದೆ ಎಂಬ ಸಂದೇಹ ಎದ್ದರೆ ಅದಕ್ಕಿಂತ ಮುಟ್ಟಾಳತನ ಇಲ್ಲ. ಯಾಕೆಂದರೆ ಇವಿಎಂಗಳಲ್ಲಿ ಹಾಗೆ ಕೆಲವು ಮತಗಳನ್ನು ಅಳಿಸುವ ಆಯ್ಕೆಯೇ ಇಲ್ಲ! ಇನ್ನೂ ಮಜಾ ಏನು ಎಂದರೆ, ಇವಿಎಂಗಳಲ್ಲಿ ಕೊಟ್ಟ ಕೊನೆಯ ಮತ ದಾಖಲಾದ ಸಮಯ ಕೂಡ ದಾಖಲಾಗುತ್ತದೆ. ಮಾತ್ರವಲ್ಲ, ಆ ಸಮಯವನ್ನು ಪೋಲಿಂಗ್ ಆಫೀಸರ್, ತನ್ನ ಪೋಲಿಂಗ್ ಆಫೀಸರ್ ಡೈರಿಯಲ್ಲಿ ಕೂಡ ಬರೆದಿಟ್ಟುಕೊಂಡಿರುತ್ತಾರೆ. ಹಾಗಾಗಿ, ಇವಿಎಂಗಳು ಸ್ಟ್ರಾಂಗ್ ರೂಮ್ ಸೇರಿದ ಮೇಲೆ ಮತ ಹಾಕಿದರೆ ಅದು ಮತ ಎಣಿಕೆಯ ದಿನದ ಪ್ರಾರಂಭದಲ್ಲೇ ಗೊತ್ತಾಗಿಬಿಡಬೇಕು!

ಈಗ ಹೇಳಿ, ಇವಿಎಂಗಳನ್ನು ಹ್ಯಾಕ್ ಮಾಡಲಾಗುತ್ತಿದೆ, ಮತಗಳನ್ನು ತಿದ್ದಲಾಗುತ್ತಿದೆ ಎಂದು ಆಕಾಶ ಭೂಮಿ ಒಂದು ಮಾಡುವಂತೆ ಕಿರುಚುತ್ತಿರುವವರ ಆರೋಪದಲ್ಲಿ ಒಂದು ಸಣ್ಣ ಮರಳಿನ ಕಣದಷ್ಟಾದರೂ ಸತ್ಯ ಇದೆಯೇ?

ಬರಹ ಕೃಪೆ - ರೋಹಿತ್ ಚಕ್ರತೀರ್ಥ | ಹೊಸ ದಿಗಂತ 22 ಮೇ 2019

Edited By

Ramesh

Reported By

Ramesh

Comments