ಕರಗ.....ಏನಿದು ಕರಗ? ಏನಿದರ ಹಿನ್ನೆಲೆ?

19 May 2019 4:40 PM |
660 Report

ಕರಗ ಅಂದರೆ ‘ಕಯ್ಯಲ್ಲಿ ಮುಟ್ಟದೆ(ಕ) ರುಂಡದಲ್ಲಿ(ರ) ಮುಡಿದು ಗತಿಸುವುದು(ಗ)’ ಎಂದು ಹೇಳಲಾಗುತ್ತದೆ.ಮಡಿಕೆಯ ಮೇಲೆ ಹೂವಿನ ಮೇರುವೆ(ಪಿರಮಿಡ್) ಇಟ್ಟು ಅದನ್ನೇ ತಲೆಯ ಮೇಲೆ ದರಿಸಲಾಗುವುದು. “ತಿಗಳ” ಸಮುದಾಯದ ಜನರು ಆಚರಿಸುವ ಈ ಹಬ್ಬದ ಆಚರಣೆಗೆ 500 ವರ್ಷಗಳ ಇತಿಹಾಸವಿದೆ. ಈ ಹಬ್ಬಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ, ಅದು ಮಹಾಬಾರತಕ್ಕೆ ಕೊಂಡೊಯ್ಯುತ್ತದೆ. ಮಹಾಬಾರತದ ದ್ರೌಪದಿ ಆದಿಶಕ್ತಿಯ ಒಂದು ರೂಪವೆಂದು ಹೇಳಲಾಗುತ್ತದೆ.

ಕುರುಕ್ಷೇತ್ರ ಕಾಳಗ ಮುಗಿದು ಪಾಂಡವರೆಲ್ಲೆರೂ ಕೈಲಾಸಕ್ಕೆ ಮರಳುತ್ತಿರುತ್ತಾರೆ. ಪಾಂಡವರು ಮುಂದೆ ಹೋಗುತ್ತಾ ದ್ರೌಪದಿ ಅವರನ್ನು ಹಿಂಬಾಲಿಸಿಕೊಂಡು ಒಬ್ಬಳೇ ಬರುತ್ತಿರುತ್ತಾಳೆ. ಪಾಂಡವರು ಮತ್ತು ದ್ರೌಪದಿ ನಡುವೆ ದೂರ ಹೆಚ್ಚಾಗುತ್ತಿದ್ದಾಗ, ತಿಮರಾಸುರನೆಂಬ ರಕ್ಕಸನೊಬ್ಬ ಒಬ್ಬಂಟಿಯಾಗಿದ್ದ ದ್ರೌಪದಿಗೆ ಕಾಟ ಕೊಡಲು ಶುರು ಮಾಡುತ್ತಾನೆ.  ಆಗ ದ್ರೌಪದಿಯು ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಠಿ ಮಾಡುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ.

ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ತಾಯಿ ಆದಿಶಕ್ತಿಯಾಗಿ, ಮತ್ತೆ ಬೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಮಕ್ಕಳಿಗೆ ದುಗುಡ ಉಂಟು ಮಾಡುತ್ತದೆ. ಅವಳು ಹೋಗದಂತೆ ಬೇಡಿಕೊಳ್ಳಲು ಷ್ಣನು ಅವರಿಗೆ ಹೇಳುವನು. ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯ್ಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ಬೇಡಿ ಕೊಳ್ಳುತ್ತಾರೆ. ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತೀ ವರ್ಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು. “ಅಂದು ದ್ರೌಪದಿಯಿಂದ ಹುಟ್ಟಿದ ವೀರಕುಮಾರರೇ ನಾವು” ಎಂದು ತಿಗಳ ಸಮುದಾಯದವರ ನಂಬಿಕೆ.

ಕರಗ ನಡೆಯುವ ಬಗೆ:
ಕರಗ ಹಬ್ಬದ ಆಚರಣೆ ಹಿಂದೂ ತೂಗುತೇದಿಯ (ಕ್ಯಾಲೆಂಡರ್‍) ಮೊದಲ ತಿಂಗಳ ಸಪ್ತಮಿ ಇಂದ ಶುರುವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ 11 ದಿನಗಳ ಗಡುವಿನಲ್ಲಿ, 3 ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಹನ್ನೊಂದು ದಿನಗಳ ಸಡಗರದಲ್ಲಿ ಕಾರ‍್ಯಕ್ರಮಗಳು ಹೀಗಿರುತ್ತವೆ:

ಬಾವುಟ ಏರಿಸುವುದು: ಉತ್ಸವದ ಮೊದಲ ದಿನವಾದ ಅಂದು ಹಳದಿ ಬಣ್ಣದ ಬಾವುಟವೊಂದನ್ನು ಗುಡಿಯ ಅಂಗಳದೊಳಗೆ, ಬಿದಿರಿನ ಕಂಬದ ಮೇಲೆ ಹಾರಿಸಲಾಗುತ್ತದೆ. ಅದರಿಂದ ಕರಗ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಗಣಾಚಾರಿಗಳು, ಗಂಟೆಪೂಜಾರಿಗಳು, ವೀರಕುಮಾರರು ಮತ್ತು ಕರಗವನ್ನು ಹೊರುವವರು, ಉತ್ಸವಕ್ಕೆ ಯಾವ ತಡೆಯೂ ಇಲ್ಲದೆ ನಡೆಸಲು ಪಣ ತೊಟ್ಟು ದಾರವೊಂದನ್ನು(ಕಂಕಣ) ತಮ್ಮ ಕೈಯಿಗೆ ಕಟ್ಟಿಕೊಂಡು, ಒಂದು ದಾರವನ್ನು ಬಾವುಟ ಗಂಬಕ್ಕೆ ಕಟ್ಟುವರು.

ಶುದ್ದಿ ಕಾರ‍್ಯ: ಬಾವುಟ ಹಾರಿಸಿದ ಮರುದಿನದಿಂದ ಈ ಕೆಲಸ ಶುರುವಾಗುತ್ತದೆ. ಆದಿಶಕ್ತಿಯು ಬೂಮಿಗೆ ಬರುತ್ತಿರುವುದರಿಂದ ಕೆಟ್ಟ ಶಕ್ತಿಗಳು ಸುಳಿಯಬಾರದೆಂದು ಪೂಜೆಗಳನ್ನು ನಗರದ ಆರು ಕಡೆಗಳಲ್ಲಿ ಎಂಟು ದಿನ ಮಾಡಲಾಗುತ್ತದೆ. ಪ್ರತಿ ದಿನದ ಪುಣ್ಯ ಸ್ನಾನದ ಬಳಿಕ, ಕೆಟ್ಟ ಶಕ್ತಿಗಳನ್ನು ದೂರವಿಡುವಂತೆ ಕರಗದ ಪೂಜಾರಿಯು ದೇವಿಯನ್ನು ಕೋರುವುದು ಪದ್ದತಿ.

ಆರತಿ ಉತ್ಸವ: ಇದು ಕರಗ ಹಬ್ಬದ ಆರನೇ ದಿನದಂದು ನಡೆಯುತ್ತದೆ. ಮೊದಲ ದಿನದಿಂದ ಆರನೇ ದಿನದವರೆಗೂ ಪೂಜೆಗಳು ನಡೆಯುತ್ತಿರುತ್ತವೆ. ತಿಗಳ ಸಮುದಾಯದ ಹೆಂಗಸರು ಅಂದು ಅವರ ದೇವತೆಯಾದ ದ್ರೌಪದಿಗೆ ಆರತಿ ಸೇವೆಯನ್ನು ಮಾಡುವರು. ಯಲಕುಂಗ ಹೂವಿನಿಂದ ಅಂದಗೊಂಡ ಅಕ್ಕಿ ಮತ್ತು ಬೆಲ್ಲ ಇರುವ ಪಾತ್ರೆಗಳಿಗೆ, ಮಲ್ಲಿಗೆ ಮತ್ತು ಕನಕಾಂಬರ ಹೂವುಗಳಿಂದ ಸುತ್ತುವರಿದ ಕೋಲನ್ನು ಸಿಕ್ಕಿಸಲಾಗಿರುತ್ತದೆ. ಪಾತ್ರೆಯ ಒಳಗೆ ದೀವಿಗೆಯನ್ನು ಇಡಲಾಗಿರುತ್ತದೆ. ಈ ಆರತಿಯನ್ನು ಹೆಂಗಸರು ತಲೆ ಮೇಲೆ ಹೊತ್ತು ಗುಡಿಯವರೆಗೂ ಬಂದು ಆಮೇಲೆ ಪೂಜೆ ಮಾಡುತ್ತಾರೆ. ಗರಡಿಮನೆಯಲ್ಲಿ ಕಸರತ್ತು ಮಾಡಿರುವ ಹುಡುಗರು ಕಾಳಗ ಕಲೆಗಳಾದ ಕತ್ತಿ ವರಸೆ, ಕೋಲು ವರಸೆ, ಕೊಂಬು ವರಸೆ ಮುಂತಾದ ಚಳಕಗಳನ್ನು ತೋರಿಸುವರು. ಹಾಗೆಯೇ ಅಂದು ‘ಪೋತರಾಜ’ನ (ಪೋತರಾಜನ ಬಗ್ಗೆ ಮುಂದೆ ತಿಳಿಯುತ್ತದೆ) ಮೂರ್ತಿ ಮತ್ತು ತ್ರಿಶೂಲವನ್ನು ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಮೆರವಣಿಗೆ ಮುಗಿದ ಮೇಲೆ ಗುಡಿಯಲ್ಲಿ ಮಹಾ ಮಂಗಳಾರತಿ ಮಾಡುವರು.

ಹಸಿ ಕರಗ: ಹಬ್ಬದ ಏಳನೇ ದಿನ ‘ಹಸಿ ಕರಗ’ ಮಾಡಲಾಗುತ್ತದೆ. ಅಂದು ಶಕ್ತಿಪೀಟ ಇದೆ ಎಂದು ಹೇಳಲಾಗುವ ಕೆರೆಯ ಸುತ್ತಮುತ್ತಲಿನ ಜಾಗವನ್ನು ಚೊಕ್ಕ ಮಾಡಿ ಹೂವುಗಳಿಂದ ಅಂದಗೊಳಿಸುತ್ತಾರೆ. ವೀರಕುಮಾರರು, ಗಣಾಚಾರಿಗಳು, ಗಂಟೆಪೂಜಾರಿಗಳು, ಕುಲಪುರೋಹಿತರು ಶಕ್ತಿಪೀಟಕ್ಕೆ ಪೂಜೆ ಮಾಡುತ್ತಾರೆ. ಆಮೇಲೆ ಕರಗವನ್ನು ಹೊರುವುವವರಿಗೆ ಜಳಕವನ್ನು ಮಾಡಿಸುವರು. ಕೆಂಪು ಬಟ್ಟೆಯನ್ನು ಹೊದಿಸಿ, ಒಡವೆ ಮತ್ತು ಹೂವುಗಳಿಂದ ಸಿಂಗರಿಸಿ ಹಸಿ ಕರಗವನ್ನು ಮಾಡಿ ಅದನ್ನು ಪೀಟದ ಮೇಲೆ ಇಡಲಾಗುತ್ತದೆ. ಅದರ ಮಗ್ಗುಲಲ್ಲಿ ಮಾಟದಕೋಲು ಮತ್ತು ಬಾಕು(ಕತ್ತಿ) ಒಂದನ್ನೂ ಇಡಲಾಗುತ್ತದೆ.

ಕರಗವನ್ನು ಹೊತ್ತು ಕೊಳ್ಳುವವರು ಇವೆಲ್ಲವುದಕ್ಕೂ ಪೂಜೆ ಮಾಡುವರು. ಆಗ ವೀರಕುಮಾರರು ಕರ್ಪೂರವನ್ನು ಹಚ್ಚುವರು ಮತ್ತು ಸುತ್ತ ಮುತ್ತ ನೆರೆದ ಬಕ್ತರು ‘ಗೋವಿಂದ’ನ ಹೆಸರು ಹೇಳಲು ಶುರು ಮಾಡುವರು. ಆಗ ವೀರಕುಮಾರರು ‘ಗೋವಿಂದ ದಿಕ್ ದೀ ದಿಕ್ ದೀ’ ಎಂದು ಹೇಳುತ್ತಾ ತಾವು ಹಿಡಿದಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದು ಕೊಳ್ಳಲು ಶುರು ಮಾಡುತ್ತಾರೆ ( ಅಲಗುಸೇವೆ ). ಈ ಹೊತ್ತಿನಲ್ಲಿ ಒಂದು ರೀತಿಯ ದೈವೀ ಶಕ್ತಿ ಕರಗವನ್ನು ಹೊತ್ತುಕೊಳ್ಳುವವರ ಮೇಲೆ ಅವರಿಸೊಕೊಂಡಂತಾಗಿ ಅವರು ಎಡಗೈಯ್ಯಲ್ಲಿ ಪೀಟದ ಮೇಲಿರುವ ಮಾಟದ ಕೋಲಿನ ಜೊತೆ ಹಸಿಕರಗವನ್ನೂ ಮತ್ತು ಬಲಗೈಯ್ಯಲ್ಲಿ ಬಾಕುವನ್ನು ಎತ್ತಿಕೊಳ್ಳುವವರು.

ಅಲ್ಲಿಂದ ಅವರು ಹಸಿಕರಗವನ್ನು ಹಿಡಿದುಕೊಂಡು ‘ಶಕ್ತಿ ಸ್ಥಳ’ ಎಂದು ಹೇಳಲಾಗುವ ಏಳು ಸುತ್ತಿನ ಕೋಟೆಯೆಡೆಗೆ ನಡೆಯುತ್ತಾರೆ ಮತ್ತು ವೀರಕುಮಾರರು ‘ದಿಕ್ ದೀ’ ದಿಕ ದೀ’ ಎಂದು ಅಲಗುಸೇವೆ ಮಾಡುತ್ತಾ ಅವರನ್ನು ಹಿಂಬಾಲಿಸುತ್ತಾರೆ. ಕೋಟೆ ತಲುಪಿದ ಮೇಲೆ ಮತ್ತೊಮ್ಮೆ ಹಸಿಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಧರ್ಮರಾಯ ಸ್ವಾಮೀ ಗುಡಿಯ ಕಡೆಗೆ ಮೆರವಣಿಗೆ ಸಾಗುತ್ತದೆ. ಗುಡಿಯು ಸ್ವಲ್ಪ ದೂರವಿರುವಾಗ ಹಸಿ ಕರಗ ಹೊತ್ತಿರುವವರು ಮಂಡಿಯೂರಿ ಕುಳಿತುಕೊಳ್ಳುವವರು ಆಗ ವೀರಕುಮಾರರು ಮತ್ತೊಮ್ಮೆ ಅಲಗುಸೇವೆ ನೀಡಿ ‘ಶಕ್ತಿ’ಯನ್ನು ಗುಡಿಗೆ ಕರೆದು ಕೊಂಡು ಬರುತ್ತಾರೆ. ಆಗ ಗಂಟೆಪೂಜಾರಿಗಳು ಕೊರವಂಜಿ ಹಾಡನ್ನು ಹಾಡುವರು ಮತ್ತು ಕರಗವನ್ನು ಹೊತ್ತಿರುವವರು ಅದಕ್ಕೆ ತಕ್ಕಂತೆ ಕುಣಿಯುವವರು. ಗುಡಿ ತಲುಪಿದ ಮೇಲೆ ಪೂಜೆ ಸಲ್ಲಿಸಿ ಹಸಿ ಕರಗವನ್ನು ಇಳಿಸಲಾಗುವುದು.

ಪೊಂಗಲು ಸೇವೆ: ಇದು ಹಬ್ಬದ ಎಂಟನೆ ದಿನ ನಡೆಯುತ್ತದೆ. ಅಂದು ಹೆಣ್ಣುಮಕ್ಕಳು ಅಕ್ಕಿ ಮತ್ತು ಬೆಲ್ಲವನ್ನು ಗುಡಿಗೆ ಒಯ್ದು ಗುಡಿಯ ಅಂಗಳದಲ್ಲಿ ಪೊಂಗಲನ್ನು ಮಾಡಿ ದೇವಿಗೆ ಎಡೆ ಮಾಡುವರು. ತಮ್ಮ ಸೇವೆಯಿಂದ ತಾಯಿಯು ಸಂತಸಗೊಂಡು ಆಕೆಯು ನಮ್ಮನ್ನು ಹರಸುವಳು ಎಂಬ ನಂಬಿಕೆ ಜನರದ್ದು. ಅಂದಿಡೀ ದಿನ ಅಲ್ಲೇ ಇರುವರು. ಇರುಳಲ್ಲಿ ಗಂಟೆ ಪೂಜಾರಿಗಳು ದ್ರೌಪದಿ ಬಗ್ಗೆ ಪುರಾಣ ಕತೆಗಳನ್ನು ಹೇಳುವುದು ಮತ್ತು ಬಕ್ತರು ಅದನ್ನು ಕೇಳುವುದು ವಾಡಿಕೆ.

ಹೂವಿನ ಕರಗ (ಕರಗ ಶಕ್ತ್ಯೋತ್ಸವ): ಹಬ್ಬದ ಒಂಬತ್ತನೇ ನಡೆಯುವುದು ಗಾವು ಸೇವೆ: ಹಬ್ಬದ ಹತ್ತನೇ ಜರಗುವ ಇದು ಪೋತರಾಜನ ಕುರಿತು ಮಾಡುವ ಸೇವೆಯಾಗಿದೆ. ಪೋತರಾಜನ ಬಗ್ಗೆ ಒಂದು ಕತೆಯಿದೆ. ಪೋತರಾಜನು ಬಹಳ ಶೂರನಾಗಿದ್ದವನು ಮತ್ತು “ಏಳು ಸುತ್ತಿನ ಕೋಟೆ” ಎಂಬ ಅರಸುನಾಡನ್ನು ಆಳುತ್ತಿದ್ದನು(ಸಾಮ್ರಾಜ್ಯ). ಆತ ಶಿವನ ಮೊರೆಗ(ಬಕ್ತ)ನಾಗಿದ್ದು, ಬಾಡನ್ನು ತಿನ್ನದವನಾಗಿರುತ್ತಾನೆ. ಇನ್ನೂ ಹೆಚ್ಚು ಶಕ್ತಿಯನ್ನು ಪಡೆಯಲು ನೂರಾವೊಂದು ರಾಜರನ್ನು ಬಲಿ ಕೊಟ್ಟು ಶಿವನನ್ನು ಒಲಿಸಿಕೊಳ್ಳಲು ಪೂಜೆಯೊಂದನ್ನು ಮಾಡಬಯಸಿರುತ್ತಾನೆ. ನೂರು ರಾಜರನ್ನು ಸೆರೆ ಹಿಡಿದಾದಮೇಲೆ ಅವನ ಕೋಟೆಯ ಹತ್ತಿರ ನಿದ್ದೆ ಮಾಡುತ್ತಿದ್ದ ಬೀಮನನ್ನು ನೂರಾ ಒಂದನೇ ರಾಜನಾಗಿ ಸೆರೆ ಹಿಡಿಯುತ್ತಾನೆ.

ಪಾಂಡವರು ಬೀಮನ ಇಲ್ಲದಿರುವಿಕೆ ಬಗ್ಗೆ ಕ್ರಿಶ್ಣನನ್ನು ಕೇಳುತ್ತಾರೆ. ಕೃಷ್ಣನಿಗೆ ಎಲ್ಲವೂ ಗೊತ್ತಾಗಿ ಬೀಮನನ್ನು ಉಳಿಸಲು ಅರ್ಜುನನನ್ನು ಚೆಂದದ ಬಳೆ ಮಾರುವ ಕೊರವಂಜಿ ಹೆಣ್ಣಾಗಿ ಮಾಡಿ ಪೋತರಾಜನ ಕೋಟೆಯ ಹತ್ತಿರ ಕಳುಹಿಸುವನು. ಆಕೆಯನ್ನು ನೋಡಿ ಆಕೆಯ ಚಂದಕ್ಕೆ ಮನಸೋತ ಪೋತರಾಜನು ಆಕೆಯನ್ನು ಮದುವೆಯಾಗಲು ಬಯಸುವನು. ಆಗ ಎಲ್ಲವೂ ತಿಳಿದ ಕೃಷ್ಣನು ಎರಡು ಬೇಡಿಕೆ ಮುಂದಿಡುತ್ತಾನೆ. ಸೆರೆಹಿಡಿದಿರುವ ಅರಸರನ್ನು ಬಿಡುಗಡೆಗೊಳಿಸುವುದು ಒಂದನೆಯದಾದರೆ, ಕೊರವಂಜಿಗಳು ಹಸಿಬಾಡು(ಹಸಿಮಾಂಸ) ತಿನ್ನುವುದರಿಂದ ಪೋತರಾಜನೂ ತಿನ್ನಬೇಕೆನ್ನುವುದು ಎರಡೆಯನೆದು. ಪೋತರಾಜನು ಎರಡೂ ಬೇಡಿಕೆಗೆ ಒಪ್ಪುವನು. ಮೊದಲಿಗೆ ಪೋತರಾಜನಿಗೆ ಕರಿಮೇಕೆಯೊಂದನ್ನ್ನುಕೊಟ್ಟು ಹಸಿಯಾಗಿಯೇ ತಿನ್ನಲು ಹೇಳುವರು. ಪೋತರಾಜನು ಬೀಮನ ಜೊತೆ ನೆತ್ತರು ಸಮೇತ ಹಸಿ ಬಾಡನ್ನು ತಿನ್ನುವನು ಆಗ ಪಾಂಡವರು ತಮ್ಮ ತಂಗಿ ಶಂಕೊದರಿಯನ್ನು ಪೋತರಾಜನಿಗೆ ಕೊಟ್ಟು ಮದುವೆ ಮಾಡುತ್ತಾರೆ ಎಂದು ಆ ಒಂದು ಕತೆ ಹೇಳುತ್ತದೆ.

ಹಬ್ಬದ ಹತ್ತನೇ ದಿನದಂದು ಪೋತರಾಜ, ಅರ್ಜುನ ಮತ್ತು ದ್ರೌಪದಿ ತೇರಿನ ಮೆರವಣಿಗೆಯನ್ನು ಶಕ್ತಿಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಶಾಂತಿಪೂಜೆಯನ್ನು ಮಾಡಿ ಪೋತರಾಜನ ಬಗ್ಗೆ ಪುರಾಣಕತೆಗಳನ್ನು ಹೇಳಲಾಗುತ್ತದೆ. ಆಮೇಲೆ ಉತ್ಸವ ಗುಡಿಗೆ ಮರಳುತ್ತದೆ. ಇದಾದಮೇಲೆ ‘ಪೋತರಾಜ’ ಬಣದ ಪೂಜಾರಿಗಳ ಮನೆಗೆ ಹೋಗಿ ಪೂಜೆಯನ್ನು ಮಾಡಲಾಗುತ್ತದೆ. ಆಗ ಆ ಪೂಜಾರಿಗಳ ಮೈ ಮೇಲೆ ಪೋತರಾಜನು ಬಂದಂತಾಗಿ ಅವರು ನುಗ್ಗಿ ಬರುವರು. ಅವರನ್ನು ತಿಳಿಗೊಳಿಸಿ ಗುಡಿಗೆ ಕರೆದುಕೊಂಡು ಬರಲು ಕರಿಮೇಕೆಯನ್ನು ಕೊಡಲಾಗುತ್ತದೆ ಮತ್ತು ಮಂತ್ರಗಳನ್ನು ಹೇಳಲಾಗುತ್ತದೆ. ಆಗ ಪೋತರಾಜ ಪೂಜಾರಿಗಳು ಮೇಕೆಯನ್ನು ಬಾಯಿಂದ ಕಡಿದು ಅದರ ನೆತ್ತರನ್ನು ಹೀರಿ ಶಾಂತರಾಗುವರು. ಆಮೇಲೆ ಆರತಿಯೊಂದಿಗೆ ಗಾವುಸೇವೆ ಕೊನೆಗೊಳ್ಳುತ್ತದೆ

ವಸಂತೋತ್ಸವ: ಇದು ಹಬ್ಬದ ಕಡೆಯ ದಿನ ನಡೆಯುವುದು. ಎಲ್ಲರೂ ಗುಡಿಯ ಮುಂದೆ ಸೇರಿ ಕರಗದ ಕೂಡುದಲೆ(ಯಶಸ್ಸು)ಯನ್ನು ಆಚರಿಸುವರು. ಚಿಕ್ಕವರಿಗೆ ದೊಡ್ಡವರಿಗೆ ಅಂದು ನಲಿವಿಗಾಗಿ ಆಟಗಳನ್ನು ಏರ್ಪಡಿಸಿರುತ್ತಾರೆ. ಎಲ್ಲರೂ ಪಾಲ್ಗೊಂಡು ಸಂತಸಪಡುತ್ತಾರೆ. ಇರುಳಲ್ಲಿ ಮೊದಲ ದಿನ ಏರಿಸಿದ್ದ ಬಾವುಟವನ್ನು ಇಳಿಸಲಾಗುತ್ತದೆ. ಬಾವುಟಗಂಬಕ್ಕೆ ಪೂಜೆಯನ್ನು ಮಾಡಿ ಕೈಯಿಗೆ ಕಟ್ಟಿಕೊಂಡಿದ್ದ ದಾರವನ್ನು (ಕಂಕಣ) ಗುಡಿಗೆ ಹಿಂದಿರುಗಿಸಲಾಗುತ್ತದೆ.

ಬರಹ:-Guru Arya 

Edited By

Ramesh

Reported By

Ramesh

Comments