ತಾಯಿ ಬನಶಂಕರಿ...ಶಾಖಾಂಬರೀ ದೇವಿಗೆ ಪೀತಾಂಬರ ಸೀರೆ ಸಮರ್ಪಣೆ......ಶಂಭೋಕೋ

23 Jan 2019 7:49 AM |
427 Report

ಕೋಟೆನಾಡು ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕವಾದ, ದೇಶೀಯ ಸಾಂಸ್ಕೃತಿಕ ಶ್ರೀಮಂತಿಕೆಯ ಬಾದಾಮಿಯಿಂದ ಐದು ಕಿಲೋಮೀಟರ್ ದೂರದ ಚೋಳಗುಡ್ದ ಗ್ರಾಮದ ಬೆಟ್ಟದ ಸಮೀಪ ತಿಲಕವನದಲ್ಲಿರುವ ಪುಣ್ಯಕ್ಷೇತ್ರ ಬನಶಂಕರಿ, ರಾಜ್ಯ ಮತ್ತು ರಾಷ್ಟ್ರದಲ್ಲಿ ಹೆಸರಾದ ಸ್ಥಳ, ಪ್ರತೀ ವರ್ಷ ಬನದ ಹುಣ್ಣಿಮೆಯ ದಿನ ನಡೆಯುವ ಸಂಭ್ರಮದ ಬನಶಂಕರಿ ಜಾತ್ರೆ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು, ಶತಮಾನಗಳ ಹಿಂದೆ ಇಲಕಲ್ ನ ಶಿಲ್ಪಿ ವಿರೂಪಾಕ್ಷಿ ಬಡಿಗೇರ ಮಾಡಿದ ಬನಶಂಕರಿಯ ತೇರನ್ನು ಎಳೆಯಲು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದಿಂದ ಆರುಮನೆತನದ ಗೌಡರು ಮಾಡಿದ ಹಗ್ಗವನ್ನು ಒಂದೊಂದು ಹಳೀಬಂಡಿಗೆ ಕಿಲಾರಿತಳಿಯ ಹದಿನಾರು ಎತ್ತುಗಳನ್ನು ಹೂಡಿಕೊಂಡು ಎರಡು ಹಳೀ ಬಂಡಿಗಳಲ್ಲಿ ಪುಂಡಿನಾರಿನಿಂದ ತಯಾರಿಸಿದ ಹಗ್ಗ ಪ್ರತೀ ವರ್ಷ ಬರುತ್ತದೆ.

ಪ್ರತಿ ವರ್ಷ ಬನದ ಹುಣ್ಣಿಮೆ ಜಾತ್ರೆಯ ದಿನ ಬನಶಂಕರಿದೇವಿಗೆ ಇಲಕಲ್ ಪೀತಾಂಬರ ಸೀರೆ ಉಡಿಸುವ ಪದ್ದತಿ ಇದೆ, ಸೂಳೆಬಾವಿ ಗ್ರಾಮದ ಗೀತಾ ಜನಿವಾರ ಶ್ರದ್ಧಾಭಕ್ತಿಯಿಂದ ಹತ್ತು ದಿನಗಳ ಕಾಲ ಮಡಿ ಇದ್ದು ಪೀತಾಂಬರ ಸೀರೆ ನೇಯ್ದಿದ್ದಾರೆ, ಶ್ರೀನಿವಾಸ್ ಪಲ್ಲಾ ವಿನ್ಯಾಸ ಮಾಡಿರುವ ಸೀರೆಯು ಕುಂಕುಮ ಬಣ್ಣ ಹೊಂದಿದ್ದು, ಕೃಷ್ಣಾನಂದ ಸೆರಗು ಹೊಂದಿದೆ, ಪೂಜ್ಯರಾದ ಶ್ರೀ ದಯಾನಂದಪುರಿ ಸ್ವಾಮೀಜಿಗಳು ಸೂಳೆಬಾವಿಗೆ ಭೇಟಿ ನೀಡಿದ್ದಾಗ ತಾಯಿ ಬನಶಂಕರಿಗೆ ನೀಡಲು ಸೀರೆ ಇಲ್ಲಿಯೇ ತಯಾರಾಗಬೇಕು ಎಂದು ಹೇಳಿದ್ದರಂತೆ, ಅದಕ್ಕಾಗಿಯೇ ಸೂಳೇಬಾವಿಯ ಶಾಖಾಂಬರಿ ನೇಕಾರ ಸಹಕಾರಿ ಸಂಘದಲ್ಲಿ ಇಲಕಲ್ ಸೀರೆಯನ್ನು ಕೈಮಗ್ಗದಿಂದ ನೇಯ್ದು ಸಿದ್ದಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಬಸವರಾಜ್ ರಾಮದುರ್ಗ ತಿಳಿಸಿದರು.

ಪಾದಯಾತ್ರೆಯ ವಿವರ- ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠದಿಂದ ಪಾದಯಾತ್ರೆ ಮೂಲಕ ದೇವಿಗೆ ಪಿತಾಂಬರ ಸೀರೆಯನ್ನು ಸಮರ್ಪಿಸಲು ದಿನಾಂಕ 14-01-2019 ರ ಸೋಮವಾರದಂದು ಬೆಳಿಗ್ಗೆ ಆರು ಘಂಟೆಗೆ ಹೊರಟು ಬುಕ್ಕಸಾಗರ, ಕಡೇಬಾಗಿಲು ಮಾರ್ಗವಾಗಿ ಗಂಗಾವತಿ,ಕನಕಗಿರಿ, ತಾವರಗೇರ, ಮುದೇನೂರ, ದೋಟಿಹಾಳ ಮಾರ್ಗವಾಗಿ ಇಲಕಲ್ ಮೂಲಕ ಹೊಲಗೇರಿ, ಗುಡೂರ, ಕಾಟಾಪುರ, ಶ್ರೀ ಸಾಯಿಮಂದಿರ ಮೂಲಕ ದಿನಾಂಕ 20-01-2019 ರ ಭಾನುವಾರದವರೆಗೆ ಸಾಯಂಕಾಲ ಆರು ಘಂಟೆಯ ಹೊತ್ತಿಗೆ ಅಂದಾಜು 169 ಕಿ.ಮೀ. ದೂರವನ್ನು ಏಳು ದಿನಗಳ ಕಾಲ ಪಾದಯಾತ್ರೆಯಲ್ಲಿ ಕ್ರಮಿಸಲಾಯಿತು, ಯಾತ್ರೆಯಲ್ಲಿ ಜಾತಿ ಬೇದ ಮರೆತು ಎಲ್ಲರೂ ಪಾಲ್ಗೋಂಡಿದ್ದರು.

ದೇವಾಂಗ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಏಳು ದಿನಗಳಕಾಲ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು, ಪಿತಾಂಬರ ಸೀರೆ ಸಮರ್ಪಣೆ ಹಾಗೂ ಪಾದಯಾತ್ರೆ ಸಮಾರೋಪ ಸಮಾರಂಭ ಬನಶಂಕರಿಯ ಹಂಪಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿತು, ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಡಾ.ಜಿ.ರಮೇಶ್, ನೇಕಾರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ಪಿತಾಂಬರ ಸೀರೆ ಪಾದಯಾತ್ರೆ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಅಶೋಕ್ ಹೊನ್ನಳ್ಳಿ, ಪರಗಿ ನಾಗರಾಜ, ಸತೀಶ್ ಸಪ್ಪರದ, ಅಗಳಿ ಪಂಪಾಪತಿ, ಶಂಕರ್ ಬುಚಡಿ, ರವಿ ಲೋಲಿ, ಎಚ್.ವೈ.ಗದ್ದನಕೇರಿ, ಶ್ರೀಮತಿ ಶಾಸಮ್ಮ ಜೇವರಗಿ, ತಮಿಳುನಾಡು ದೇವಾಂಗ ಸಮಾಜದ ಅಧ್ಯಕ್ಷ ಮದಿವಾಲನ್, ಕುಪ್ಪುಸ್ವಾಮಿ, ಅಮಾತೆಪ್ಪ ಕೊಪ್ಪಳ ಸೇರಿದಂತೆ ಸಾವಿರಾರು ದೇವಾಂಗ ಸಮುದಾಯದ ಹಿರಿಯರು, ಮಹಿಳೆಯರು, ಮಕ್ಕಳು ಈ ಐತಿಹಾಸಿಕ ಪಿತಾಂಬರ ಸೀರೆ ಸಮರ್ಪಣಾ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು. ಬನಶಂಕರಿ ಕ್ಷೇತ್ರದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದ ಆವರಣದಿಂದ ಬೃಹತ್ ಮೆರವಣಿಗೆಯ ಮುಖಾಂತರ ಪೀತಾಂಬರ ಸೀರೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಶ್ರೀ ಬನಶಂಕರಿ ದೇವಸ್ಥಾನಕ್ಕೆ ಹೋಗಿ ಸಮರ್ಪಿಸಲಾಯಿತು. ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಪಾದಯಾತ್ರೆಯಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಹಾಗೂ ಪಿತಾಂಬರ ನೇಯ್ದ ಶ್ರೀಮತಿ ಗೀತಾ ಜನಿವಾರ ಅವರನ್ನು ಅಭಿನಂದಿಸಲಾಯಿತು. 

Edited By

Ramesh

Reported By

Ramesh

Comments